ನವಿಲು
ಗ್ಯಾಲಿಫಾರ್ಮೀಸ್ ಗಣದ ಫ್ಯಾಸಿಯಾನಿಡೀ ಕುಟುಂಬದ ಪ್ಯಾವೋನಿನೀ ಉಪಕುಟುಂಬಕ್ಕೆ ಸೇರಿದ ಸುಂದರ ಪಕ್ಷಿ (ಪೀಫೌಲ್, ಪೀಕಾಕ್). ಮಯೂರ ಪರ್ಯಾಯ ನಾಮ. ಇದರಲ್ಲಿ ಮೂರು ಮುಖ್ಯ ಬಗೆಗಳುಂಟು. ಇವುಗಳಲ್ಲಿ ಬಲು ಸುಂದರವಾದ್ದು, ಪರಿಚಿತವಾದ್ದು ಭಾರತದ ನವಿಲು. ಇದರ ವೈಜ್ಞಾನಿಕ ಹೆಸರು ಪಾವೊ ಕ್ರಿಸ್ಟೇಟಸ್. ಇದು ಶ್ರೀಲಂಕಾದಲ್ಲೂ ಉಂಟು. ನವಿಲಿನ ಇನ್ನೊಂದು ಬಗೆ ಜಾವದ ಹಸುರು ನವಿಲು. ಇದಕ್ಕೆ ಪೇವೋ ವ್ಯೂಟಿಕಸ್ ಎಂಬ ಶಾಸ್ತ್ರೀಯ ಹೆಸರುಂಟು. ಇದರ ವ್ಯಾಪ್ತಿ ಬರ್ಮದಿಂದ ಜಾವದ ವರೆಗೆ. ಮೂರನೆಯ ಬಗೆಯಾದ ಆಪ್ರೋಪೇವೋ ಕಾಂಗೆನ್ಸಿಸ್ ಎಂಬುದು ಆಫ್ರಿಕದ ಕಾಂಗೋ ರಾಜ್ಯದಲ್ಲಿ ಕಾಣದೊರೆಯುತ್ತದೆ. 

ಭಾರತದ ನವಿಲು ದೊಡ್ಡ ಗಾತ್ರದ ಪಕ್ಷಿ. ಇದರ ದೇಹ ಸುಮಾರು 75 ಸೆಂಮೀ. ಉದ್ದ ಇದೆ. ಗಂಡಿನಲ್ಲಿ ಸುಮಾರು 150 ಸೆಂಮೀ. ಉದ್ದದ `ಬಾಲ ಉಂಟು. ಇದು ವಾಸ್ತವಾಗಿ ಬಾಲದ ಗರಿಗಳಿಂದ ರಚಿತವಾದುದಲ್ಲ. ಬಾಲದ ಮೇಲ್ಭಾಗದಲ್ಲಿರುವ ನೂರಾರು ಅಲಂಕಾರಿಕ ಗರಿಗಳಿಂದ ರೂಪುಗೊಂಡಿದೆ. ಒಂದೊಂದು ಗರಿಯ ತುದಿಯಲ್ಲೂ ತುಂಬ ಸುಂದರವಾದ `ಕಣ್ಣು ಉಂಟು. ನೀಲಿ ಮತ್ತು ಕಂಚಿನ ಬಣ್ಣಗಳ ಈ ಕಣ್ಣುಗಳು ಗರಿಗಳ ಅಂದವನ್ನು ಹೆಚ್ಚಿಸಿವೆ. ಪ್ರತಿ ಡಿಸೆಂಬರ್ ವೇಳೆಗೆ ಗರಿಗಳು ಬಿದ್ದು ಹೋಗುವವು. ಹೆಣ್ಣುಗಳಲ್ಲಿ ಬಾಲ ಇಲ್ಲ. ನವಿಲಿಗೆ ಉದ್ದವಾದ ಕಾಲುಗಳೂ ಉದ್ದನೆಯ ಹಾಗೂ ಸಪೂರಾದ ಬಳಕುವ ಕತ್ತೂ ಉಂಟು. ಗಂಡು ನವಿಲಿನ ಮೈ ಬಣ್ಣ ಮನಮೋಹಕ. ಮಿಂಚುವ ಲೋಹೀಯ ನೀಲಿ ಹಸುರುಗಳ ಮಿಶ್ರ ಬಣ್ಣ ಇದು. ಗಂಡು ಮತ್ತು ಹೆಣ್ಣುಗಳೆರಡರಲ್ಲೂ ತಲೆಯ ಮೇಲೆ ಕೆಲವು ತುರಾಯಿ ಗರಿಗಳಿಂದ ರಚಿತವಾದ ಶಿಖೆ ಉಂಟು. ಹೆಣ್ಣಿನ ಮೈಬಣ್ಣ ಗಂಡಿನದರಷ್ಟು ಮೋಹಕವಲ್ಲ. 

ನವಿಲು ಸಾಮಾನ್ಯವಾಗಿ ಪರ್ಣಪಾತಿ ಕಾಡುಗಳಲ್ಲಿ ಬೆಟ್ಟ ಸೀಮೆಗಳಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುತ್ತದೆ. ಆದಷ್ಟು ನೀರಿನ ನೆಲೆಗಳಿಗೆ (ನದಿ, ಝರಿಗಳಿಗೆ) ಹತ್ತಿರದಲ್ಲೇ ಇದರ ವಾಸ್ತವ್ಯ. ಕೆಲವು ಸಲ ಹಳ್ಳಿಗಳ ಸನಿಹದಲ್ಲಿ ಕಾಣದೊರೆಯುವುದೂ ಉಂಟು. ಮುಂಬೆಳಗಿನ ಹಾಗೂ ಸಾಯಂಕಾಲದ ವೇಳೆ ನವಿಲು ತನ್ನ ಆಹಾರವನ್ನು ಅರಸಿಕೊಂಡು ತಿರುಗುತ್ತದೆ. ರಾತ್ರಿಕಾಲವನ್ನು ಎತ್ತರದ ಮರಗಳಲ್ಲಿ ಕಳೆಯುತ್ತದೆ. ಕಾಳುಕಡ್ಡಿ, ಹುಳುಹುಪ್ಪಟೆ, ಹಲ್ಲಿ, ಕಪ್ಪೆ, ಹಾವು ಮುಂತಾದವು ಇದರ ಆಹಾರ. ಭಾರತದಲ್ಲಂತೂ ನವಿಲಿಗೆ ನಾಗರಹಾವಿನ ವೈರಿ ಎಂಬ ಪ್ರಖ್ಯಾತಿಯೂ ಉಂಟು. ಇದು ಮರಿ ನಾಗರಗಳನ್ನು ಮೆಚ್ಚಿನಿಂದ ತಿನ್ನುತ್ತದೆ ಎನ್ನಲಾಗಿದೆ. ಇದರಿಂದಾಗಿ ನವಿಲು ಇರುವ ಕಡೆ ನಾಗರ ಹಾವಿನ ಕಾಟ ಕಡಿಮೆ. ಅರಣ್ಯಗಳಲ್ಲಿ ಹುಲಿ ಚಿರತೆ ಮುಂತಾದ ಪ್ರಾಣಿಗಳ ಚಲನವಲನಗಳ ಬಗ್ಗೆಯೂ ನವಿಲು ತನ್ನ ವಿಶಿಷ್ಟ ಕೇಕೆಯಿಂದ ಇತರ ಪ್ರಾಣಿಗಳ ಮತ್ತು ಮನುಷ್ಯರ ಗಮನ ಸೆಳೆಯುತ್ತದೆ. ತುಂಬ ನಾಚಿಕೆ ಸ್ವಭಾವದ ಹಾಗೂ ಚುರುಕಾದ ಪಕ್ಷಿ ಇದು. ಅಪಾಯದ ಸುಳಿವು ಸಿಕ್ಕಾಗ ಸಾಮಾನ್ಯವಾಗಿ ಪೊದೆಗಳ ನಡುವೆ ಮೆಲ್ಲನೆ ನುಸುಳಿಕೊಂಡು ಹೋಗುತ್ತದೆ. ಅಗತ್ಯವೆನಿಸಿದರೆ ಭಾರವಾಗಿ ರೆಕ್ಕೆ ಬಡಿದು ಕೆಳಮಟ್ಟದಲ್ಲಿ ಹಾರಬಲ್ಲದು. 

ನವಿಲಿನಲ್ಲಿ ಬಹುಪತ್ನಿತ್ವ ಉಂಟು. ಇದರ ಸಂತಾನೋತ್ಪತ್ತಿಯ ಕಾಲ ಪ್ರಮುಖವಾಗಿ ಮಳೆಗಾಲ (ಜನವರಿ-ಅಕ್ಟೋಬರ್). ಈ ಕಾಲದಲ್ಲಿ ಒಂದೊಂದು ಗಂಡು ನವಿಲೂ 2-5 ಹೆಣ್ಣುಗಳ ಜೊತೆಗೂಡಿಕೊಂಡು ಮೋಹಕವಾದ ಪ್ರಣಯಾಚರಣೆಯ ನಾಟ್ಯದಲ್ಲಿ ತೊಡಗುತ್ತವೆ. ಆಗ ತನ್ನ ಆಲಂಕಾರಿಕ ಗರಿಗಳ ಬಾಲವನ್ನು ಮೇಲಕ್ಕೆತ್ತಿ ಬೀಸಣಿಗೆಯಂತೆ ಹರಡಿಕೊಂಡು ರೆಕ್ಕೆಗಳನ್ನು ಬಿಚ್ಚಿಕೊಂಡು ಆಗಿಂದ್ದಾಗ್ಗೆ ಕಂಪಿಸುತ್ತ ಬಿಂಕದಿಂದ ವಿವಿಧ ಭಂಗಿಗಳಲ್ಲಿ ನೃತ್ಯಗೈಯುತ್ತದೆ. ಕೆಲವೊಮ್ಮೆ ಮಳೆ ಬರುವ ಮುನ್ನ ಮೋಡ ಕವಿದಾಗ ಉಂಟಾಗುವ ತಂಪು ಗಾಳಿಯಿಂದ ಉತ್ತೇಜಿತಗೊಂಡು ಹರ್ಷದಿಂದ ಹೀಗೆ ಕುಣಿಯುವುದೂ ಉಂಟು. ಗಂಡು ನವಿಲಿನ ಈ ನೃತ್ಯದ ಬಗ್ಗೆ ಎರಡು ರೀತಿಯ ವೈಜ್ಞಾನಿಕ ವಿವರಣೆಗಳುಂಟು. ಒಂದರ ಪ್ರಕಾರ ಈ ನೃತ್ಯ ಹೆಣ್ಣಿನ ಲಕ್ಷ್ಯ ಸೆಳೆಯುವ ಪ್ರಕ್ರಿಯೆ. ಆದರೆ, ವಾಸ್ತವವಾಗಿ ಗಂಡು ನವಿಲು ಹೆಣ್ಣು ನವಿಲಿಗೆ ಎದುರಾಗಿ ನಿಂತು ಕುಣಿಯುವುದೇ ಇಲ್ಲ. ಹೆಣ್ಣು ನವಿಲು ಗಂಡಿನೆಡೆಗೆ ಬರುತ್ತಿದ್ದಂತೆಯೇ ಗಂಡು ವಿರುದ್ಧ ದಿಕ್ಕಿಗೆ ತಿರುಗಿ ನಿಂತುಕೊಳ್ಳುತ್ತದೆ. ಈ ವಿಚಿತ್ರ ನಡತೆ ಹಲವಾರು ಸಲ ನಡೆದ ನಂತರ ಗಂಡು ಹೆಣ್ಣುಗಳು ಕೂಡುತ್ತವೆ. ಆಸ್ಕರ್ ಹೈನ್‍ರಾತ್ ಎಂಬ ಪಕ್ಷಿ ವಿಜ್ಞಾನಿಯ ಅಭಿಪ್ರಾಯದಂತೆ ಗಂಡು ನವಿಲು ತನ್ನ ಗರಿಗಳನ್ನು ಹರಡುವುದು ಹೆಣ್ಣಿನ ಲಕ್ಷ್ಯ ಸೆಳೆಯುವ ಸಲುವಾಗಿ ಇರುವ ಒಂದು ರೀತಿಯ ಜಾಹೀರಾತು. ಆದರೆ, ಶೆಂಕೆಲ್ ಎಂಬಾತನ ಪ್ರಕಾರ ಗ್ಯಾಲಿಫಾರ್ಮಿಸ್ ಗಣದ ಇತರ ಹಕ್ಕಿಗಳಲ್ಲಿ (ಉದಾಹರಣೆಗೆ ಕೋಳಿ) ಸಂತಾನಾಭಿವೃದ್ಧಿಯ ಶ್ರಾಯದಲ್ಲಿ ಗಂಡು ಹೆಣ್ಣು ಕೂಡುವ ಮುನ್ನ ಗಂಡು ಹಕ್ಕಿ ಹೆಣ್ಣಿಗೆ ಆಹಾರವನ್ನು ಅರ್ಪಿಸುವ ವಿಚಿತ್ರ ಪರಿಪಾಠವುಂಟು. ಇದೇ ನಡವಳಿಕೆಯೇ ನವಿಲಿನಲ್ಲೂ ಇದ್ದು, ಯಾವುದೇ ಆಹಾರ ಇಲ್ಲದಿದ್ದರೂ ಒಂದು ತೆರನ ಆಚರಣೆ ವಿಧಿಯಾಗಿ ಬಿಟ್ಟಿದೆ. ನವಿಲು ತನ್ನ ನೃತ್ಯದಲ್ಲಿ ತೊಡಗಿರುವಾಗ ಆಗಾಗ ಕೇಕೆ ಹಾಕುತ್ತದೆ. ಹೆಣ್ಣು ನವಿಲು ಪೊದೆಗಳ ಸಂದಿಯಲ್ಲಿ ಕಡ್ಡಿ ಎಲೆಗಳನ್ನು ಸೇರಿಸಿ ಒರಟು ಬಗೆಯ ಗೂಡು ರಚಿಸಿ 3-5 ಮೊಟ್ಟೆಗಳನ್ನು ಇಡುತ್ತದೆ. ಕೆಲವೊಮ್ಮೆ ಮರಗಳ ಪೊಟರೆಗಳಲ್ಲಿ, ಹದ್ದು ಗಿಡುಗ ಮುಂತಾದವು ತೊರೆದು ಹೋದ ಗೂಡುಗಳಲ್ಲಿ ಮೊಟ್ಟೆ ಇಡುವುದೂ ಉಂಟು. ಮೊಟ್ಟೆಗಳು ಹೊಳೆಯುವ ಕೆನೆಯ ಬಣ್ಣಕ್ಕಿವೆ. 28 ದಿವಸಗಳ ತರುವಾಯ ಮೊಟ್ಟೆಯೊಡೆದು ಮರಿಗಳು ಹೊರಬರುವವು. 

ನವಿಲು ಬಹಳ ಹಿಂದಿನಿಂದಲೂ ಪರಿಚಿತವಾಗಿರುವ ಅಲಂಕಾರ ಪಕ್ಷಿ. 4000 ವರ್ಷಗಳ ಹಿಂದೆ ವ್ಯಾಪಾರಿಗಳ ಮೂಲಕ ಇದು ಮೆಸೊಪೊಟೇಮಿಯಾಕ್ಕೆ ಹೋಯಿತೆನ್ನಲಾಗಿದೆ. ಅಲ್ಲಿಂದ ಮೆಡಿಟರೇನಿಯನ್ ದೇಶಗಳಿಗೂ ಹರಡಿತು. ನವಿಲಿನ ಸೌಂದರ್ಯ, ಬೇರೆ, ಬೇರೆ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮಥ್ರ್ಯ ಹಾಗೂ ಇದನ್ನು ವೃದ್ಧಿಸುವ ಸುಲಭ ಸಾಧ್ಯತೆಯಿಂದಾಗಿ ಇದು ಯುರೋಪ್, ಅಮೆರಿಕಗಳಂಥ ಶೀತ ದೇಶಗಳಲ್ಲಿಯೂ ಜನಪ್ರಿಯವಾಗಿದೆ. ನವಿಲನ್ನು ಭಾರತದಲ್ಲಿ ಶ್ರೀ ಸರಸ್ವತಿ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಾಹನವೆಂದು ಪರಿಗಣಿಸಲಾಗಿದ್ದು, ಇದು ಪೂಜ್ಯವೆನಿಸಿದೆ. ಆದರೂ ಕೆಲವೆಡೆಗಳಲ್ಲಿ ಇದನ್ನು ಕೊಬ್ಬಿಗಾಗಿ (ನವಿಲಿನ ಎಣ್ಣೆ) ಹೆಚ್ಚಿನ ಪರಿಮಾಣದಲ್ಲಿ ಕೊಲ್ಲಲಾಗುತ್ತಿತ್ತು. ಈ ಎಣ್ಣೆ ಕೂದಲ ಬೆಳವಣಿಗೆಗೆ, ಸಂಧಿವಾತ ರೋಗಕ್ಕೆ ಒಳ್ಳೆಯ ಔಷಧಿ ಎಂದು ಹೇಳಲಾಗಿದೆ. ನವಿಲು ಈಗ ಭಾರತದ ರಾಷ್ಟ್ರ ಪಕ್ಷಿ. ಆದ್ದರಿಂದ ಇದಕ್ಕೆ ಕಾನೂನಿನ ರಕ್ಷಣೆ ದೊರೆತಿದೆ. ಅನೇಕ ವರ್ಷಗಳ ತಳೀಕರಣದಿಂದಾಗಿ ಪೂರ್ಣ ಬಿಳಿಯ ಬಣ್ಣದ ನವಿಲು, ಮಚ್ಚೆಗಳಿರುವ ನವಿಲು, ಕಪ್ಪು ರೆಕ್ಕೆಯ ನವಿಲು ಮುಂತಾದ ಹಲವಾರು ಬಗೆಗಳನ್ನು ವೃದ್ಧಿಸಲಾಗಿದೆ.

ಹಿಂದಿನ ಕಾಲದಿಂದಲೂ, ನವಿಲುಗರಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಶ್ರೀಕೃಷ್ಣ ತನ್ನ ಕಿರೀಟದಲ್ಲಿ ನವಿಲುಗರಿಗಳನ್ನು ಧರಿಸುತ್ತಿದ್ದನೆನ್ನಲಾಗಿದೆ. ಭಾರತದ ರಾಜರು ಚಕ್ರಾಧಿಪತಿಗಳು ದರ್ಬಾರು ಮಾಡುವಾಗ ಅಥವಾ ಹೊರಹೊರಟಾಗ ಅವರ ಅಕ್ಕಪಕ್ಕಗಳಲ್ಲಿ ಶೋಭಾಯಮಾನವಾದ ನವಿಲು ಗರಿಗಳನ್ನು ಚಾಮರದಂತೆ ಹಿಡಿದುಕೊಂಡು ಗಾಳಿ ಹಾಕುವ ಸೇವಕಿಯರಿರುವುದು ಸಾಮಾನ್ಯವಾಗಿತ್ತು. ಅವಾಗಿಯೇ ಉದುರಿದ ಗರಿಗಳಿಂದ ಬೀಸಣಿಗೆಗಳನ್ನು ತಯಾರಿಸಲಾಗುತ್ತದೆ. ಹಿಂದಿನ ಕಾಲದ ಹಡಗುಗಳ ಮುಂಭಾಗ ನವಿಲಿನಾಕಾರದಲ್ಲಿರುತ್ತಿತ್ತು. ಮೊಗಲ್ ಚಕ್ರಾಧಿಪತಿ ಷಹಜಾನನ ಪ್ರಸಿದ್ಧವಾದ ಸಿಂಹಾಸನ ನವಿಲಿನಾಕಾರವಾಗಿತ್ತು. 

ಜಾವದ ಹಸುರು ನವಿಲು ಹೆಚ್ಚುಕಡಿಮೆ ಭಾರತದ ನವಿಲಿನ ಗಾತ್ರದ್ದೇ. ಆದರ, ಹೆಸರೇ ಹೇಳುವಂತೆ ಇದರ ಮೈಬಣ್ಣ ಹಸುರು. ಇದರ ಜೀವನ ಕ್ರಮವೂ ಭಾರತದ ನವಿಲಿನಂತೆಯೇ ಇದೆ. ಆದರೆ, ಇದು ಬೇರೆ ಬಗೆಯ ಸಾಕುಪಕ್ಷಿಗಳೊಂದಿಗೆ ಬೆರೆಯುವುದಿಲ್ಲವಾದ್ದರಿಂದ, ಹಾಗು ಕಡು ಚಳಿಯನ್ನು ತಡೆದುಕೊಳ್ಳುವುದಿಲ್ಲವಾದ್ದರಿಂದ ಇದನ್ನು ಸಾಕುವುದು ಕಷ್ಟ. 

ಕಾಂಗೋ ನವಿಲು ದೇಹ ಗಾತ್ರದಲ್ಲಿ ಸೌಂದರ್ಯದಲ್ಲಿ ಭಾರತದ ನವಿಲಿಗಿಂತ ಭಿನ್ನವಾಗಿದೆ. ಇದರ ಪತ್ತೆಯಾದದ್ದು 1936ರಲ್ಲಿ. ಅಲ್ಲಿಯ ವರೆಗೆ ಆಫ್ರಿಕದಲ್ಲಿ ನವಿಲು ಇಲ್ಲವೆಂದೇ ತಿಳಿಸಲಾಗಿತ್ತು. ಭಾರತದ ನವಿಲಿನಂತಲ್ಲದೇ ಕಾಂಗೋ ನವಿಲಿನಲ್ಲಿ ಏಕಪತ್ನಿತ್ವ ಇದೆ.				

(ಎಂ.ಎನ್.ವಿ.ಐ)
(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ